Thursday, January 14, 2016

ಗುಳೇದ ಲಕ್ಕಮ್ಮ

ಜಾತ್ರೆಯೆಂದಾಕ್ಷಣ ಊರಿನಲ್ಲಿ ಸದ್ದು ಗದ್ದಲ ಇರುತ್ತದೆ, ಆದರೆ ಈ ಊರಲ್ಲಿ ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆಯವರಿಗೆ ಯಾರೊಬ್ಬರು ಕಾಣುವುದಿಲ್ಲ! ಪ್ರತಿಯೊಂದು ಮನೆ, ಊರಿನ ಆಸ್ಪತ್ರೆ, ಶಾಲೆ, ಅಂಚೆ ಕಚೇರಿಗೆ ಬೀಗ ಹಾಕಿರುತ್ತಾರೆ. ನೀರವ ಮೌನ ಆವರಿಸುತ್ತದೆ. ಇದು ಈ ಗ್ರಾಮದ ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿ. ಎಲ್ಲಲ್ಲಿ ಜನವಸತಿ ಇದೇಯೋ ಅಲ್ಲಲ್ಲಿ ದೇವರುಗಳು ಕೂಡ ಇವೆ. ಅವುಗಳಿ ಪ್ರತಿವರ್ಷ ಜಾತ್ರೆಗಳು ಕೂಡ ನಡೆಯುತ್ತವೆ. ಆ ಸಂದರ್ಭದಲ್ಲಿ ಊರಿನಲ್ಲಿ ಸಡಗರವೋ ಸಡಗರ. ಎಲ್ಲ ಮನೆಗಳ ಮುಂದೆ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ ಜಾತ್ರೆ ಮಾಡುವುದು ಸಂಪ್ರದಾಯ ಆದರೆ ಈ ಊರಿನಲ್ಲಿ ಮಾತ್ರ ಜಾತ್ರೆಯ ದಿನ ಊರೆ ಖಾಲಿಯಾಗುತ್ತದೆ. ಹೌದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಇಂತಹ ವಿನೂತನ ಪದ್ಧತಿ ಇದೆ. ಪ್ರತಿಯೊಬ್ಬರು ಊರ ಹೊರಗೆ ನಡೆಯುವ ತಮ್ಮೂರ ಜಾತ್ರೆಗೆ ಮನೆ ಬೀಗ ಹಾಕಿಕೊಂಡು ಹೋಗುತ್ತಾರೆ, ಯಾವೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ. ಪ್ರತಿವರ್ಷ ಶೂನ್ಯ ಮಾಸದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ, ಜಾತ್ರೆ ಮಾಡುವಾಗ ಈ ಗ್ರಾಮದಲ್ಲಿ ಇಂತಹ ವಿಶೇಷ ಸಂಪ್ರದಾಯವನ್ನು ಆಚರಣೆ ಮಾಡುತ್ತಾರೆ. ಅಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30ರವರೆಗೆ ಊರೊಳಗೆ ಪ್ರವೇಶ ಮಾಡುವಂತಿಲ್ಲ. ಇನ್ನೂ ಗ್ರಾಮ ದೇವತೆಯಾಗಿರುವ ಲಕ್ಕಮ್ಮ ಮೂಲತಃ ಶಾನಭೋಗರ ಮನೆಯ ಹೆಣ್ಣು ಮಗಳು ಎಂಬ ನಂಬಿಕೆಯಿದ್ದು, ಅವಳನ್ನು ಗೌಡರ ಮನೆಗೆ ಕೊಡಲಾಗಿತ್ತು ಎಂಬ ಪ್ರತೀತಿ ಇದೆ. ಅದಕ್ಕಾಗಿ ಇಂದಿಗೂ ಕೂಡ ಜಾತ್ರೆಯ ಸಂದರ್ಭದಲ್ಲಿ ಗೌಡರ ಮನೆಯಿಂದಲೇ ಆಕೆಗೆ ಮುತ್ತೈದೆ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತದೆ
 ಈ ಊರಿನಿಂದ ಒಂದುವರೆ ಕಿ.ಮೀ ದೂರದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ. ಗ್ರಾಮದಲ್ಲಿ ಸುಮಾರು 2000 ಮನೆಗಳು 8,500 ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಜಾತ್ರೆಯ ದಿನ ದೇವಿಯ ಅದ್ದೂರಿ ಮೆರವಣಿಗೆ ನಡೆಯುತ್ತದೆ. ಲಕ್ಕಮ್ಮ ಮೂಕಿ ದೇವತೆ ಆದದರಿಂದಲೋ ಏನೋ ದೇವಿಯ ಮುಂದೆ ಜೋರಾಗಿ ಉರಿಮೆಯನ್ನ ಬಡೆಯಲಾಗುತ್ತದೆ. ಗ್ರಾಮದ ತುಂಬ ಸುತ್ತವ ದೇವಿ ನಂತರ ಊರ ಹೊರಗಿನ ಪ್ರದೇಶಕ್ಕೆ ಹೋಗುತ್ತಾಳೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಯಾರೂ ಇರುವಂತಿಲ್ಲ .ಅಂದು ಹುಟ್ಟಿದ ಕೂಸು, ಬಾಣಂತಿ, ಹಾಸಿಗೆ ಹಿಡಿದ ಹಿರಿಯ ಜೀವಗಳು, ಮಕ್ಕಳು, ಅಂಗವಿಕಲರು ಸೇರಿ ಯಾರೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ, ಎಲ್ಲರೂ ಜಾತ್ರೆಗೆ ಮನೆಯ ಬೀಗ ಹಾಕಿಕೊಂಡು ಹೋಗಬೇಕು. ಒಂದು ವೇಳೆ ಯಾರಾದರೂ ಮೃತಪಟ್ಟರೆ, ಶವ ಸಂಸ್ಕಾರ ಕೂಡ ಮಾಡುವಂತಿಲ್ಲ. ಇನ್ನೂ ಊರನ್ನು ಕಾಯಲು ನಾಲ್ಕೈದ ಜನ ತಳವಾರರನ್ನು ನೇಮಿಸಲಾಗಿರುತ್ತದೆ. ಅವರು ಊರ ಅಗಸಿಯಲ್ಲಿ ಬೇಲಿ ಹಾಕಿಕೊಂಡು ಈಡಿ ದಿನ ಯಾರೂ ಊರ ಒಳಗಡೆ ಹೋಗದಂತೆ ಕಾಯುತ್ತಿರುತ್ತಾರೆ
: ಇತ್ತ ಗುಳೆಹೋದ ತಂಡ ಮರದ ನೆರಳನ್ನು ಆಶ್ರಯಿಸುತ್ತಾರೆ. ಬಂಧುಗಳಿಗೆ ಸಂಭ್ರಮದ ಸ್ವಾಗತ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ನೀಡಿ, ಉಪಚರಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯ ಭೋಜನವಂತೂ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ , ಅಗಸೆ ಚಟ್ನಿ, ಗುರಳ್ಳ ಚಟ್ನಿ, ಕಡಲೇ ಚಟ್ನಿ ವಿವಿಧ ರೀತಿಯ ಪಲ್ಯಗಳು ಹಾಹಾ.. ಅದನ್ನೂ ಸವಿದವರು ಎಂದು ಕೂಡ ಲಕ್ಕಮ್ಮನ ಜಾತ್ರೆಯನ್ನು ಮರೆಯಲಾರರು ಎನ್ನುವಷ್ಟರ ಮಟ್ಟಿಗೆ ಖಾದ್ಯಗಳು ಆಹಾರ ಪ್ರಿಯರನ್ನು ಸೆಳೆಯುತ್ತವೆ.
 ಕೆಲವೊಂದು ಸಂಪ್ರದಾಯಗಳು ಧರ್ಮದ ಭಾವನೆಗಳನ್ನು ಮೀರಿಸುತ್ತವೆ ಎನ್ನುವುದಕ್ಕೆ ಚೋರನೂರು ಗ್ರಾಮವೇ ಉದಾಹರಣೆಯಾಗಿದೆ. ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮುಸ್ಲಿಂ ಸಮಾಜದ ಮನೆಗಳು, ಕೆಲವೊಂದು ಕ್ರಿಶ್ಚಿಯನ್ ಸಮುದಾಯದ ಮನೆಗಳು, ಇವರು ಕೂಡ ಗುಳೇದ ಲಕ್ಕಮ್ಮ ಜಾತ್ರೆ ಆಚರಿಸುತ್ತಾರೆ, ಇವರು ಕೂಡ ಬೀಗ ಹಾಕಿ ಜಾತ್ರೆಗೆ ಹೋಗಿ, ಜಾತ್ರೆಯನ್ನು ಆಚರಿಸುವ ಸಂಪ್ರದಾಯವು ಧರ್ಮಗಳ ಭಾವನೆಯನ್ನು ಮೀರಿಸಿದೆ. ಅನಾದಿಕಾಲದಿಂದ ಇಂತಹ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆ ಯವರಿಗೆ ಎಲ್ಲಾ ಮನೆಗಳಿಗೆ ಬೀಗ ಹಾಕುತ್ತಾರೆ, ಯಾರೊಬ್ಬರು ಇಂತಹ ಸಂಪ್ರದಾಯ ಮುರಿಯುವುದಿಲ್ಲ. ಎಲ್ಲಾ ಜನರು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಇನ್ನೂ ಗ್ರಾಮದ ಕೆರೆ ಅಂಗಳದಲ್ಲಿ ಸೇರುವ ಭಕ್ತರು ತಮ್ಮ ಜಾನುವಾರುಗಳನ್ನು ಬೆದರಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ.
 ಊರ ಹೊರಗಡೆ ಪ್ರತಿಷ್ಠಾಪನೆಗೊಳ್ಳುವ ದೇವಿಗೆ ಭಕ್ತರು ತಮ್ಮದೇಯಾದ ರೀತಿಯಲ್ಲಿ ಭಕ್ತಿ ಸಮರ್ಪಿಸುತ್ತಾರೆ. ಅದರಲ್ಲೂ ಯುವ ಜನರು ಸಂಪ್ರದಾಯದಂತೆ ಕೋಲಾಟವನ್ನು ಆಡುವ ಮೂಲಕ ಜಾತ್ರಗೆ ವಿಶೇಷ ಮೆರಗು ನೀಡಿ ಜನರನ್ನು ರಂಜಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದು ವಿಶೇಷ. ಇನ್ನೂ ಮತ್ತೆ ಸಂಜೆ ಗೋಧೂಳಿ ಸಮಯಕ್ಕೆ ಸರಿಯಾಗಿ ಚರಗವನ್ನು ಚೆಲ್ಲುತ್ತಾ ಮುಂದೆ ಮುಂದೆ ಸಾಗುತ್ತಾರೆ. ಲಕ್ಕಮ್ಮ ದೇವಿಯ ಹೊತ್ತು ಮೆರವಣಿಗೆಯ ಮೂಲಕ ಪಟ್ಟಣವನ್ನು ಪ್ರವೇಶ ಮಾಡುತ್ತಾರೆ.ಜಾತ್ರೆಯಲ್ಲಿ ಸಾಮೂಹಿಕವಾಗಿ ವನಬೋಜನ ಮಾಡುವುದರ ಮೂಲಕ  ಹಳೆಯ ಜಗಳ, ಮನಸ್ತಾಪಗಳನ್ನು ಮರೆತು ಒಂದಾಗುತ್ತಾರೆ. ಜಾತ್ರೆಯನ್ನು ಊರಾಚೆ ಹೋಗಿ ಮಾಡುವುದರಿಂದ ಸಾಂಕ್ರಾಮಿಕ ರೋಗ ಇತ್ಯಾದಿ ಅನಿಷ್ಠಗಳು ಬರುವುದಿಲ್ಲವೆಂದು ನಂಬುತ್ತಾರೆ.
ಒಟ್ಟಿನಲ್ಲಿ ವಸುದೈವ ಕುಟುಂಬಕಂ ಎನ್ನುವ ಮಾತನ್ನು ಆಚರಣೆಗೆ ತರುವ ಮೂಲಕ ಗುಳೆ ಲಕ್ಕಮ್ಮನ ಹೆಸರಿನಲ್ಲಿ ಒಂದಾಗಿರುವ ಚೋರುನೂರು ಗ್ರಾಮ ಬೇರೆ ಗ್ರಾಮಗಳಿಗೆ ಆದರ್ಶನವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ( ತುತಾ೵ಗಿ ಬರೆದಿರುವ ಕಾರಣ ಕಾಗುಣಿತ ಹಾಗೂ ವಾಕ್ಯ ರಚನೆ ಸರಿಯಾಗಿರದಿದ್ದರೆ ಸರಿಮಾಡಿಕೊಂಡು ಓದಿ)

No comments:

Post a Comment