Wednesday, October 2, 2013

ಅಡ್ಡಪಲ್ಲಕ್ಕಿಗೆ ಅಡ್ಡಗಾಲು ಯಾಕೆ...?

ಅಡ್ಡಪಲ್ಲಕ್ಕಿಗೆ ಅಡ್ಡಗಾಲು ಯಾಕೆ...?
------
ಇಂದು ಎಲ್ಲ ಮಾಧ್ಯಮಗಳಲ್ಲಿಯೂ ಸಹ ಬಹುಚರ್ಚಿತವಾಗಿರುವ ವಿಷಯ ಪಂಚಪೀಠಾಧಿಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ.
ವೀರಶೈವ ಪರಂಪರೆಯಲ್ಲಿ ಅದರಲ್ಲೂ ಪಂಚಪೀಠಗಳಲ್ಲಿ ಈ ಅಡ್ಡಪಲ್ಲಕ್ಕಿಗೆ ತನ್ನದೇಯಾದ ವಿಶೇಷ ಸ್ಥಾನವಿದೆ. ಹರ ಮುನಿದರು ಗುರು ಕಾಯುವನಯ್ಯಾ ಎಂಬಂತೆ, ವೀರಶೈವರಲ್ಲಿ ಗುರು ಶಿವನಿಗಿಂತಲೂ ದೊಡ್ಡವ. ಗುರು-ಲಿಂಗ-ಜಂಗಮ, ಪ್ರಸಾದ, ಪಾದೋದಕಗಳು ಪ್ರತಿಯೋಬ್ಬ ವೀರಶೈವರು ಪಾಲಿಸುತ್ತಾ ಬಂದಿರುವ ಆಚರಣೆಗಳು. ಗುರುಗಳ ಪಾದದ ನೀರನ್ನು ( ಪಾದೋದಕ) ಲಿಂಗಕ್ಕೆ ಹಾಕಿಕೊಳ್ಳುವ ಗುರುವಿನ ಕರುಣೆಗೆ ಪಾತ್ರರಾಗುತ್ತಾ ಬಂದಿರುವುದು ವೀರಶೈವರ ಆಚರಣೆಗಳಲ್ಲಿ ಒಂದು. ಇಂದಿಗೂ ನಾಡಿನ ಅನೇಕ ದತ್ತಿ ಇಲಾಖೆ ದೇವಸ್ಥಾನಗಳಲ್ಲಿಯೂ ದೇವರಿಗೆ ನೈವೈದ್ಯ ಮಾಡುವ ಸಂದರ್ಭದಲ್ಲಿ ಗುರುವಿನ ಪಾದೋದಕ ಪಡೆದ ನಂತರವೇ ನೈವೈದ್ಯ ಮಾಡುವ ಪದ್ದತಿ ಜಾರಿಯಲ್ಲಿದೆ. ಅಂದರೇ ಗುರುವನ್ನು ಸಾಕ್ಞಾತ್ ಶಿವನ ರೂಪವೆಂದೇ ಪರಿಗಣಿಸಲ್ಪಡಲಾಗುತ್ತಿದೆ.
ಇನ್ನೂ ಪೀಠಗಳ ಪರಂಪರೆ ವಿಚಾರವಾಗಿ ಬಂದರೆ , ರಂಭಾಪುರಿ ವೀರ ಸಿಂಹಾಸನ, ಉಜ್ಜೈನಿ ಸದ್ಧರ್ಮ ಸಿಂಹಾಸನ, ಕೇದಾರ ವೈರಾಗ್ಯ ಸಿಂಹಾಸನ, ಶ್ರೀಶೈಲ ಸೂರ್ಯ ಸಿಂಹಾಸನ ಹಾಗೂ ಕಾಶಿಯನ್ನು ಜ್ಞಾನ ಸಿಂಹಾಸನವೆಂದು ಕರೆಯಲಾಗುತ್ತಿದೆ.
(ಇಂದಿಗೂ ಸಹ ಅನೇಕ ಗುರುವಿರಕ್ತ ಸಾಧಕರು ಕಾಶಿಯ ಜಂಗಮವಾಡಿ ಮಠದಲ್ಲಿದ್ದುಕೊಂಡು ವಿಧ್ಯಾರ್ಜನೆ ಮಾಡುತ್ತಿರುವುದು ಗುರು-ವಿರಕ್ತರ ಸಂಬಂಧವನ್ನು ಸೂಚಿಸುತ್ತದೆ.)
ರಂಭಾಪುರಿ ಪೀಠದ ಗುರುಗಳಿ ಕಳೆದ ಸಾವಿರಾರು ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ 10ದಿನಗಳ ಕಾಲ ರಾಜ್ಯದ ಒಂದು ಭಾಗದಲ್ಲಿ ದಸರಾ ದರ್ಬಾರ್ ನಡೆಸುವ ಮೂಲಕ ನಾಡಿನಲ್ಲಿ ಆಧ್ಯಾತ್ಮಿಕ, ಸಾಂಸ್ಕ್ರತಿಕ  ಕ್ರಾಂತಿಗೆ ಕಾರಣವಾಗಿದ್ದಾರೆ. ಆದರೆ ಎಂದು ಸಹ ಎಲ್ಲಿಯೂ ವಿರೋಧ ವ್ಯಕ್ತವಾಗಿಲ್ಲ. ಕಾರಣ ಪರಂಪರೆ ಹಾಗೂ ಧಾರ್ಮಿಕತೆಗೆ ಯಾರು ಅಡ್ಡಗಾಲು ಹಾಕಿರಲಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ರಾಜಧಾನಿಯಲ್ಲಿ ನಡೆದ ದಸರಾ ದರ್ಬಾರ್ ಸಂದರ್ಭಧಲ್ಲಿಯೂ ಸಹ ಯಾರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ ಜೇವರ್ಗಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅಡ್ಡಗಾಲಾಗುತ್ತಿರುವುದು ವಿಷಾದನೀಯ
ಸರ್ವ ಧರ್ಮಗಳಿಗೂ ಸಮಾನ ಅವಕಾಶ : ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ  ಕೇವಲ ವೀರಶೈವರಷ್ಟೇ ಅಲ್ಲ ನಾಡಿನ ಎಲ್ಲ ಧರ್ಮದವರು ಪಾಲ್ಗೊಳ್ಳುವ ಮೂಲಕ ಪೀಠದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 10 ದಿನಗಳ ಕಾಲ ನಡೆಯುವ ಜ್ಞಾನ ದಾಸೋಹ, ಅನ್ನ ದಾಸೋಹದಲ್ಲಿ ಪ್ರಸಾದ ಸ್ವೀಕರಿಸುವ ನಾಡಿನ ಜನ ತಮ್ಮ ಕೈಲಾದ ಭಕ್ತಿ ಸಮರ್ಪಿಸುವ ಮೂಲಕ ಧರ್ಮದ ಕಾರ್ಯದಲ್ಲಿ ನಾವು ನಿಮ್ಮ ಜತಗಿದ್ದೇವೆ ಎನ್ನುವ ಐಕ್ಯ ಸಂದೇಶ ಸಾರುತ್ತಿದ್ದಾರೆ.
ಶ್ರೀಗಳ ಇಚ್ಛೆಯಲ್ಲ : ಅಡ್ಡಪಲ್ಲಕ್ಕಿ ಶ್ರೀಗಳ ಇಚ್ಛೆಯಲ್ಲ ಬದಲಿಗೆ ಭಕ್ತರ ಇಚ್ಛೆ. ಸಾಕ್ಷಾತ್ ಶಿವನ ರೂಪವಾಗಿರುವ ಶ್ರೀಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದಾಗ ತಾವು ತಿಳಿದು, ತಿಳಿಯದೆಯೋ ಮಾಡಿದ ಪಾಪಗಳು ನಾಶವಾಗಿ, ಮುಕ್ತಿ ದೊರಕುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಜತೆಗೆ ಅಡ್ಡಪಲ್ಲಕ್ಕಿಯಲ್ಲಿ ಸಾಗುವ ಶ್ರೀಗಳು ಭಕ್ತರ ಮನೆ ಬಾಗಿಲ ಬಈ ದರ್ಶನ ನೀಡುವ ಮೂಲಕ ಭಕ್ತರನ್ನು ಉದ್ದರಿಸುತ್ತಾರೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ.  ಇದಕ್ಕೆ ಜೇವರ್ಗಿಯ ಎಲ್ಲ ಸಮಾಜದ ಮುಖಂಡರು ಕೈ ಜೋಡಿಸಿರುವುದು ಸಾಕ್ಷಿಯಾಗಿದೆ. ಆದರೆ ಇದನ್ನು ಅರಿಯದ ಕೆಲ ವಿಕೃತ ಮನಸ್ಸುಗಳು ವಿನಾಕಾರಣ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವುದು ದುರಂತ.
ಬಸವಣ್ಣನವರ ಹೆಸರಲ್ಲಿ  ತಮ್ಮ ಕೆಟ್ಟಬೇಳೆ ಬೆಯಿಸಲು ಯತ್ನ : ಶತಾಯುಷಿಗಳಾಗಿರುವ ಕರ್ನಾಟಕ ರತ್ನ ಸಿದ್ಧಗಂಗಾ ಮಠಾಧಿಶರಾದ ಡಾ. ಶಿವಕುಮಾರ ಸ್ವಾಮಿಗಳು ವಿರಕ್ತ ಪರಂಪರೆಯನ್ನು ಮುಂದುವರೆಸುತ್ತಾ ಬಂದವರಾಗಿದ್ದು ತ್ರಿದೋಹ ದಾಸೋಹದಲ್ಲಿ ನಿರತರಾಗುವ ಮೂಲಕ ಕಾಯಕವೇ ಕೈಲಾಸ ಎಂಬುದನ್ನು ನಿರೂಪಿಸಿದ್ದಾರೆ. ಆದರೆ ಅವರು ಎಂದಿಗೂ ಸಹ  ಗುರು ಪರಂಪರೆಯ ಆಚರಣೆಗೆ ವಿರೋಧ ವ್ಯಕ್ತಪಡಿಸಿಲ್ಲ. ಕಾರಣ ಅವರು ಈ ಬಗ್ಗೆ ಪೂರ್ಣ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಆದರೆ ಅಲ್ಪ ಜ್ಞಾನಿಗಳಾಗಿರುವ ( ವಿರಕ್ತರು ಎಂದು ಹೇಳಿಕೊಳ್ಳುವ ) ಕೆಲವರು  ತಮ್ಮ ವೈಯಕ್ತಿಕ ದ್ವೇಷಕ್ಕೆ  ಮಹಾನ್ ಮಾನವತಾವಾದಿ ಬಸವಣ್ಣನವರ ಹೆಸರನ್ನು ಬಳಸುವ ಮೂಲಕ ತಮ್ಮ  ವಿಕೃತ ಬೇಳೆ ಬೆಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಖಂಡನೀಯ.
ಸಮಾಜ ಅರ್ಥಮಾಡಿಕೊಳ್ಳಲಿ : ನಾಡಿನ ಸಕಲ ಜನರ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸುವ ಯಾವುದೇ ಮಠಾಧೀಶರ ಕಾರ್ಯಕ್ರಮಕ್ಕೆ   ಇನ್ನೊಂದು ಮಠಾಧಿಶರು ಅಡ್ಡಿಪಡಿಸುತ್ತಿರುವುದು ಇದೇ ಮೊದಲು. ಸಮಾಜದ ಜನ ಒಂದನ್ನು ಅರ್ಥ ಮಾಡಿಕೊಳ್ಳಬೇಕು . ಯಾರು ಸಮಾಜದ ಹಿತವನ್ನು ಬಯಸುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆತ್ತಿದ್ದಾರೋ ಅವರಿಗೆ ಬೆಂಬಲ ನೀಡಲೇಬೇಕು. ಇಂದಿಗೂ ಸಹ ಪಂಚಪೀಠಗಳು, ಮೈಸೂರಿಗೆ ಸುತ್ತೂರು, ಸಿದ್ಧಗಂಗಾ, ಸಿರಿಗೆರೆ ಮಠ,  , ಸೋಂದಾ ಸ್ವರ್ಣವಲ್ಲಿ ಮಠ, ಉಡುಪಿಯ ಅಷ್ಟಮಠಗಳು, ಮದರಸಾಗಳು, ಜೈನರ ಕ್ಷೇತ್ರಗಳು, ಗುರುದ್ವಾರಗಳು, ಚರ್ಚಗಳು ಸೇರಿದಂತೆ ಹಲವಾರು ಧಾರ್ಮಿಕ ಕ್ಷೇತ್ರಗಳು  ಸಮಾಜದ ಏಳಿಗೆಗೆ ಶ್ರಮಿಸುತ್ತಿವೆ. ಆದರೆ ಎಂದಿಗೂ ಪರಸ್ಪರ ಕೆಸರೆರಚಾಡಿಕೊಂಡ ಉದಾಹರಣೆಗಳು ಇಲ್ಲ. ಕಾರಣ ಎಲ್ಲರಿಗೂ ಸಮಾಜ ಗುರುವಿನ ಸ್ಥಾನವನ್ನು ನೀಡಿದ್ದು ಅದನ್ನು ಕಾಪಾಡಿಕೊಂಡು ಬರುತ್ತಿವೆ. ಆದ್ದರಿಂದ ಸಮಾಜ ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದು ಅನಿವಾರ್ಯವಾಗಿದೆ. 

No comments:

Post a Comment